ಗಂಗಾಧರ ಮಡಿವಾಳೇಶ್ವರ ತುರಮರಿ : -         1827-1877. ಮರಾಠಿಯೇ ಪ್ರಬಲವಾಗಿದ್ದ ಅಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡಕ್ಕಾಗಿ ಶ್ರಮಿಸಿದ ಪಂಡಿತರು. ಇವರು ಹುಟ್ಟಿದ್ದು ಬೆಳಗಾಂವಿ ಜಿಲ್ಲೆಯ ಬೈಲಹೊಂಗಲ ಗ್ರಾಮದಲ್ಲಿ. ತಂದೆ ಚನ್ನಬಸವಪ್ಪ. ಉದ್ಯೋಗದಿಂದ ಒಕ್ಕಲಿಗರು. ಅವರಿಗೆ ನಾಲ್ಕು ಜನ ಮಕ್ಕಳು; ಅವರಲ್ಲಿ ಹಿರಿಯನೇ ಪ್ರಸಿದ್ಧನಾದ ಗಂಗಾಧರ ಮಡಿವಾಳೇಶ್ವರ ತುರಮರಿ. ಮೂಲಾನಕ್ಷತ್ರದಲ್ಲಿ ಹುಟ್ಟಿದ ಈ ಮಗುವಿನಿಂದ ತಮಗೆ ಒದಗಬಹುದಾದ ಅನಿಷ್ಟ ನಿವಾರಣೆಗಾಗಿ ತಂದೆತಾಯಿಗಳು ಅದನ್ನು ತಮ್ಮ ಮನೆಯ ಗುರುಗಳಾದ ಅಥಣಿಯ ಮಡಿವಾಳೇಶ್ವರ ಸ್ವಾಮಿಗಳ ಉಡಿಯಲ್ಲಿ ಹಾಕಿಬಿಟ್ಟರಂತೆ. ಹೀಗೆ ಗಂಗಾಧರ ಜಂಗಮದೀಕ್ಷೆ ಹೊಂದಿ ಪಂಡಿತ ಗುರುಗಳ ಸಾನ್ನಿಧ್ಯದಲ್ಲಿದ್ದು ಅಭ್ಯಾಸ ಮಾಡಿ ಏಳೆಂಟು ವರ್ಷಗಳಲ್ಲಿಯೇ ಕನ್ನಡ ಸಂಸ್ಕøತ ಭಾಷೆಗಳಲ್ಲಿ ಅದ್ಭುತ ಪಾಂಡಿತ್ಯ ಗಳಿಸಿದ.

ತುರಮರಿಯವರ ಖ್ಯಾತಿಯನ್ನು ಕೇಳಿದ ಸರ್ಕಾರದವರು ಇವರನ್ನು ಹುನಗುಂದ ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕನಾಗಿ ನೇಮಿಸಿದರು. ಹಳಗನ್ನಡ ಕಾವ್ಯಗಳನ್ನು ಓದಿ ಅರ್ಥೈಸುವಲ್ಲಿ ಇವರು ಪಾರಂಗತರು; ಅಲ್ಲದೆ ಕಾವ್ಯಶಾಸ್ತ್ರದಲ್ಲಿಯೂ ಅಷ್ಟೇ ನಿಷ್ಣಾತರು. ಇವರ ವಿದ್ವತ್ತನ್ನು ಕಂಡು, ಇವರನ್ನು ಬೆಳಗಾಂವಿಯ ಟ್ರೇನಿಂಗ್ ಸ್ಕೂಲಿಗೆ ವರ್ಗಮಾಡಲಾಯಿತು. ಅಲ್ಲಿ ಇವರು ಅಲ್ಪ ಮಟ್ಟಿಗೆ ಇಂಗ್ಲಿಷ್ ಅಭ್ಯಾಸ ಮಾಡಿದರು. ಭಾಷೆಯ ಮೇಲೆ ಪ್ರಭುತ್ವ ಬಂದೊಡನೆ ಅಲ್ಲಿಯೇ ಕನ್ನಡ ಭಾಷಾಂತರಕಾರರಾಗಿ ನಿಯಮಿಸಲ್ಪಟ್ಟರು.

ಇದೇ ಸಮಯದಲ್ಲಿ ತುರಮರಿ ಅವರು ಹಳಗನ್ನಡ ಕಾವ್ಯಗಳ ರಸವತ್ತಾದ ಸನ್ನಿವೇಶಗಳನ್ನು ಕೂಡಿಸಿ ಒಂದು ಕವಿತಾ ಸಂಗ್ರಹವನ್ನು ಪ್ರಕಟಿಸಿದರಲ್ಲದೆ ಹಳಗನ್ನಡ ಕಾವ್ಯಗಳಲ್ಲಿನ ಕಠಿನ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ 588 ಪುಟದ ಶಬ್ದಮಂಜರಿ ಎಂಬ ಕನ್ನಡ ಕೋಶವನ್ನು ರಚಿಸಿ ಪ್ರಕಟಪಡಿಸಿದರು. ಈ ಮಹಾಕಾರ್ಯವನ್ನು ಮಾಡಿದ್ದಕ್ಕಾಗಿ ಬ್ರಿಟಿಷ್ ಸರ್ಕಾರ ಇವರಿಗೆ ನಾಲ್ಕು ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ, ಅರ್ಧದಷ್ಟು ಪ್ರತಿಗಳನ್ನು ಕೊಂಡುಕೊಳ್ಳುವ ವ್ಯವಸ್ಥೆಮಾಡಿತಂತೆ. ಈ ಸನ್ಮಾನ ದೊರೆತ ಹೊಸದರಲ್ಲಿಯೇ ತುರಮರಿ ಅವರು ಕನ್ನಡ ಕವಿತಾ ಪದ್ಧತಿ ಎನ್ನುವ ಬೆಲೆ ಬಾಳುವ ಕೃತಿಯೊಂದನ್ನು ರಚಿಸಿ ಬೆಳಕಿಗೆ ತಂದರು. ಇವರ ಕನ್ನಡದ ಕಳಕಳಿ ಎಷ್ಟೆಂಬುದನ್ನು ಈ ಕೃತಿ ಸಾರಿಹೇಳುವಂತಿದೆ. ಇವರು ರಾಜಶೇಖರ ವಿಳಾಸಕ್ಕೆ ಬರೆದ ಟಿಪ್ಪಣಿಗಳು ಇಂದಿಗೂ ಪಂಡಿತರನ್ನು ತಲೆದೂಗಿಸುತ್ತವೆ. ಶ್ರೀ ನಿಜಗುಣ ಶಿವಯೋಗಿಗಳವರ ಕೈವಲ್ಯಪದ್ಧತಿಗೆ ಇವರು ಬರೆದ ವ್ಯಾಖ್ಯಾನ ಅಪ್ರತಿಮವಾದುದು.

ಮುಂದೆ ಇವರನ್ನು ಸರ್ಕಾರ ಕನ್ನಡ ಭಾಷಾಂತರಕಾರರನ್ನಾಗಿ ಧಾರವಾಡಕ್ಕೆ ವರ್ಗ ಮಾಡಿ ಆ ಕೆಲಸದ ಜೊತೆಗೆ ಸರ್ಕಾರೀ ಪ್ರೌಢಶಾಲೆಯಲ್ಲಿ ಕನ್ನಡ ಕಲಿಸಬೇಕೆಂದು ಅಪ್ಪಣೆ ಮಾಡಿತು. ಕಲಿಯುವುದೂ ಕಲಿಸುವುದೂ ತುರಮರಿ ಅವರಿಗೆ ಮೆಚ್ಚಿನ ವಿಷಯ. ಆ ಸಮಯದಲ್ಲಿ ಇವರು ತಮ್ಮ ಅನುಭವಬಲದಿಂದ, ಮೇಲ್ತರಗತಿಯ ಮಕ್ಕಳಿಗೆ ಸುಸಂಬದ್ಧವಾದ ಪಠ್ಯಪುಸ್ತಕಗಳನ್ನು ರಚಿಸಿದರು. ಓದಿನ ರೀತಿಯಲ್ಲಿ ಕ್ರಾಂತಿಯನ್ನು ತಂದರು. ಬಾಲಕರ ಮೆಚ್ಚುಗೆಗೆ ಪಾತ್ರರಾದರು.

ತುರಮರಿಯವರ ಬರಹಗಳಲ್ಲಿ ಹೆಚ್ಚು ಶ್ರೇಷ್ಠವಾದುದು ಕನ್ನಡ ಭಾಣ ಕಾದಂಬರಿ (1870), ಜನಮನವನ್ನು ಸೂರೆಗೊಂಡ ಕೃತಿ; ಪಂಡಿತರಿಗೂ ಪಾಮರರಿಗೂ ರಸದೂಟವನ್ನು ಮಾಡಿಸಿದ ಮಹಾಕೃತಿ. ಅನಂತರ ಇದರ ಅನೇಕ ಆವೃತ್ತಿಗಳು ಹೊರಬಂದಿವೆ. ಇದು ಸಂಸ್ಕøತ ಬಾಣಕಾದಂಬರಿಯ ತದ್ವತ್ ಭಾಷಾಂತರವಲ್ಲ, ಭಾವಾನುವಾದ, ಮೂಲ ಕೃತಿಯನ್ನು ಬೇಡಾದಲ್ಲಿ ಕುಗ್ಗಿಸಿ, ಬೇಕಾದಲ್ಲಿ ಹಿಗ್ಗಿಸಿ, ಮೂಲದ ಸ್ವಾರಸ್ಯ ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ. ಕೃತಿಯುದ್ದಕ್ಕೂ ತುರಮರಿಯವರ ಪ್ರತಿಭೆ ಅಪ್ರತಿಮವಾಗಿ ಕೆಲಸ ಮಾಡಿದೆ. ಈ ಕೃತಿಯ ಶೈಲಿ ಹೊಸಗನ್ನಡ ಗದ್ಯಕ್ಕೆ ಹಿಡಿದ ವಿಜಯ ಪತಾಕೆ. ಸಂಸ್ಕøತ ಭಾಷೆಯ ಪ್ರಭಾವವಿದ್ದರೂ ಗದ್ಯರಚನೆ ಸಂಪ್ರದಾಯಬದ್ಧವಾಗಿದ್ದರೂ ಅದರಲ್ಲಿ ತಿಳಿಗನ್ನಡನ ಸರಳತೆ, ರಮಣೀಯತೆ ಎದ್ದುಕಾಣುತ್ತವೆ. ಕುತೂಹಲಜನಕ ಕಥನಕ್ಕೆ ರಸವತ್ತಾದ ನಿರೂಪಣೆ ದೊರಕಿದೆ. ವರ್ಣನೆಗಳ ಸೊಗಸಂತೂ ಬಣ್ಣನೆಗೆ ಮೀರಿದುದು.			    (ಎಂ.ಎಸ್.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ